pexels anna shvets 4167539
covid-19

ವಿಠ್ಠಲ ದಳವಾಯಿ
ಶಿಕ್ಷಕರು

ಬಂಧುಗಳೇ ಮತ್ತು ಸ್ನೇಹಿತರೆ

ಎಲ್ಲರಿಗೂ ನಮಸ್ಕಾರ…

ಕೊರೋನಾ ರೋಗದ ೨ನೇ ಅಲೆಯು ಎಲ್ಲೆಡೆ ವ್ಯಾಪಿಸಿದೆ.. ಸಾವು ನೋವುಗಳು ಸಂಭವಿಸುತ್ತಿವೆ. ಇದು ಎಲ್ಲರಲ್ಲಿಯೂ ಸಹಜ ಆತಂಕ, ಭಯಕ್ಕೆ ಕಾರಣವಾಗಿದೆ.. ಆದರೆ ಭಯ ಪಟ್ಟುಕೊಳ್ಳಬಾರದು.. ಎಚ್ಚರಿಕೆ ಇರಬೇಕು.. ಏಕೆಂದರೆ ನಾನೂ ಪಾಸಿಟಿವ್ ಆಗಿದ್ದೆ. ನನ್ನ ಅನುಭವಗಳನ್ನು ಹಂಚಿಕೊಳ್ಳಬೇಕು. ಅದು ಇತರರಿಗೆ ಸ್ಥೈರ್ಯ ನೀಡುತ್ತದೆ ಎಂದು ಗೆಳೆಯರು ಕೋರಿದರು.. ಅದಕ್ಕಾಗಿ ಈ ಮಾತುಗಳನ್ನು ತಮ್ಮೊಡನೆ ಹಂಚಿಕೊಳ್ಳುತ್ತಿರುವೆ..

ಗೆಳೆಯರೆ, ನನಗೆ ಹೋದ ತಿಂಗಳು ಎಪ್ರಿಲ್ ೨೬ರಂದು ಮೊದಲಿಗೆ ಸುಸ್ತು ಕಾಣಿಸಿಕೊಂಡಿತು.. ಆಮೇಲೆ ನೆಗಡಿ, ಗಂಟಲು ಕೆರೆತ, ವಿಪರೀತ ಜ್ವರ ಬಂದವು.. ಎಲ್ಲರಂತೆ ನಾನೂ ಇದು ಸಾಮಾನ್ಯ ನೆಗಡಿ ಜ್ವರ ಅಂತ ತಿಳಿದಿದ್ದೆ. ಹೀಗೆ ಜ್ವರ ಬಂದಿದೆ ಅಂತ ಧಾರವಾಡದಲ್ಲಿರುವ AIDYO ಸಂಘಟನೆಯ ರಾಷ್ಟ್ರಾಧ್ಯಕ್ಷರಾಗಿರುವ, ನಮ್ಮ ಆತ್ಮೀಯ ಹಿರಿಯಣ್ಣ ರಾಮಾಂಜನಪ್ಪ ಆಲ್ದಳ್ಳಿ ಅವರಿಗೆ ತಿಳಿಸಿದೆ. ಅವರು ಕೂಡಲೇ ಬೇರೆ ರೂಮಿನಲ್ಲಿ ನೀವು ಪ್ರತ್ಯೇಕವಾಗಿರಿ ಎಂದು ಹೇಳಿ ದಾವಣಗೆರೆಯಲ್ಲಿ ವೈದ್ಯರಾಗಿರುವ ಆತ್ಮೀಯರಾದ ಡಾ.ವಸುಧೇಂದ್ರ ಅವರ ಜೊತೆ ಸಂಪರ್ಕದಲ್ಲಿದ್ದು ನಿಮ್ಮ ಸ್ಥಿತಿಗತಿ ವಿವರಿಸಿರಿ ಎಂದು ತಿಳಿಸಿದರು.. ಡಾ.ವಸುಧೇಂದ್ರ ಅವರು ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಲು ಹೇಳಿ ಕೆಲವು ಮಾತ್ರೆ, ಔಷಧಗಳನ್ನು ಕೂಡಲೇ ಶುರು ಮಾಡುವಂತೆ ತಿಳಿಸಿದರು.. ಅವರು ತಿಳಿಸಿದಂತೆ ಔಷಧೋಪಚಾರ ಮಾಡಿಕೊಳ್ಳುತ್ತಿದ್ದೆ.. ಬಹಳ ಮುಖ್ಯವಾಗಿ ರುಚಿ, ವಾಸನೆಗಳು ಇಲ್ಲವಾಗುವದರಿಂದ ಊಟ ರುಚಿಸುವುದಿಲ್ಲ.. ಆದರೆ ಸೊಪ್ಪು, ತರಕಾರಿ, ಕಾಳು, ಮೊಟ್ಟೆ ಇತ್ಯಾದಿ ಪೌಷ್ಟಿಕ ಆಹಾರವನ್ನು ಸೇವಿಸಬೇಕು.. ಒಣಹಣ್ಣುಗಳಾದ ಗೋಡಂಬಿ, ಬಾದಾಮಿ ತಿನ್ನಬೇಕು.. ಸೇಬು, ಮೋಸಂಬಿ, ದಾಳಿಂಬೆ, ಚಿಕ್ಕು ಹಣ್ಣುಗಳನ್ನು ತಂದಿಟ್ಟುಕೊಂಡು ಆಗಾಗ ಒಂದು ಹಣ್ಣು ತಿನ್ನಬೇಕು. ಬಿಸಿನೀರು ಕುಡಿಯಬೇಕು. ಮೂರು ಹೊತ್ತು ಬಿಸಿನೀರಿನ ಹಬೆ ತೆಗೆದುಕೊಳ್ಳಬೇಕು.. ಅರಿಶಿನ, ಉಪ್ಪು ನೀರಿನಲ್ಲಿ ಎರಡು ಹೊತ್ತು (ಗಾರ್ಗಲಿಂಗ್ ) ಬಾಯಿ ಮುಕ್ಕಳಿಸಬೇಕು.. ಸಾಧ್ಯವಾದರೆ ಪಲ್ಸ್ ಆಕ್ಸಿಮೀಟರ್ ತಂದಿಟ್ಟುಕೊಂಡು ಆಕ್ಸಿಜನ್ ಲೆವಲ್ ಚೆಕ್ ಮಾಡಿಕೊಳ್ಳುತ್ತಿರಬೇಕು.. ಅದು ೯೪ಕ್ಕಿಂತ ಕಡಿಮೆ ತೋರಿಸಿದರೆ ಮಾತ್ರ ವೈದ್ಯರನ್ನು ಭೇಟಿ ಮಾಡಬೇಕು.. ೬ ನಿಮಿಷ ನಡೆದು ಆಕ್ಸಿಜನ್ ಲೆವೆಲ್ ಚೆಕ್ ಮಾಡಿದಾಗ ೯೪ ಕ್ಕಿಂತ ಕಡಿಮೆ ಬಂದರೂ ವೈದ್ಯರ ಹತ್ತಿರ ಹೋಗಬೇಕು.. ವಿನಾಕಾರಣ ಹೆದರಬಾರದು. ಧೈರ್ಯದಿಂದ ಇರಬೇಕು.. ಒಳ್ಳೆಯ ಪುಸ್ತಕಗಳನ್ನು ಓದಬೇಕು. ಒಳ್ಳೆಯ ಸಿನಿಮಾ ನೋಡಬೇಕು. ಗೆಳೆಯರ ಜೊತೆ ಫೋನ್ ಮಾಡಿ ಮಾತಾಡಬೇಕು. ನ್ಯೂಸ್ ಚಾನೆಲ್ ಗಳನ್ನು ಯಾವುದೇ ಕಾರಣಕ್ಕೂ ನೋಡಬಾರದು..😃.

ಬಹಳ ಮುಖ್ಯವಾಗಿ ಕುಟುಂಬದ ಇತರ ಸದಸ್ಯರು ಸೋಂಕಿತರನ್ನು ಬಹಳ ಪ್ರೀತಿಯಿಂದ ನೋಡಬೇಕು.. ಕೊರೋನಾ ಸೋಂಕೇನೂ ಗಬಕ್ಕನೇ ಬಂದು ಉಳಿದವರಿಗೆ ಸೇರುವುದಿಲ್ಲ.. ಮೂರು ಅಂತರ ಕಾಪಾಡಿಕೊಂಡು ಮಾಸ್ಕ್ ಹಾಕಿಕೊಂಡಿದ್ದರೆ ಸಾಕು. ಏನೂ ಆಗುವುದಿಲ್ಲ..

ಈ ವಿಷಯದಲ್ಲಿ ನನ್ನ ಕುಟುಂಬ ನನಗೆ ಬೆನ್ನೆಲುಬಾಗಿ ನಿಂತಿತು.. ನನಗೆ ಆರಾಮಿಲ್ಲವೆಂದು ತಿಳಿದ ಕೂಡಲೇ ತಮ್ಮ ಸಿದ್ದು, ತನ್ನ ಸ್ಪರ್ಧಾತ್ಮಕ ಪರೀಕ್ಷೆಯ ಓದನ್ನು ಬಿಟ್ಟು ಕೂಡಲೇ ಧಾವಿಸಿದ. ಹೊಸಮನೆಯ ಕೆಲಸ, ಮನೆಯ ಜವಾಬ್ದಾರಿಯನ್ನು ಒಂಚೂರು ಬೇಸರಿಸದೇ ನಿಭಾಯಿಸಿದ.. ತಮ್ಮಂದಿರಾದ ಲಕ್ಕಪ್ಪ ಬಿಜ್ಜನ್ನವರ, ಕರೆಪ್ಪ ಅಲಕನೂರ, ರಾಜು ಗಾಣಗಿ, ಅಳಿಯ ಶಿವಾನಂದ ಇಟ್ನಾಳ ನಾನು ಕರೆದಾಗಲೆಲ್ಲ ಕೂಡಲೇ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋದರು. ನನ್ನ ಪತ್ನಿ ನಾನು ಕೇಳಿದ ಅಡುಗೆಯನ್ನು ಮಾಡಿ ಕಳುಹಿಸಿದಳು.. ಮಕ್ಕಳು ಮತ್ತು ಸೊಸೆ ಶ್ವೇತಾ ದಿನಾಲೂ ಊಟ ತಂದು ಬಡಿಸುವ ಅನ್ನಪೂರ್ಣೆಯರಾದರು. ನನ್ನ ತಾಯಿಯಂತೂ ಯಾವುದೇ ಹೆದರಿಕೆಯಿಲ್ಲದೇ ಬೆಳಿಗ್ಗೆಯೇ ಚಹಾ ಹಿಡಿದುಕೊಂಡು ಬಂದು ಕುಶಲೋಪರಿ ವಿಚಾರಿಸುತ್ತಿದ್ದದು ನನಗೆ ಅಪಾರ ಧೈರ್ಯವನ್ನು ಕೊಡುತ್ತಿತ್ತು.. ತಮ್ಮಂದಿರಾದ ಶಿವಲಿಂಗ ಮತ್ತು ಬಸವರಾಜ ಅವರೂ ಫೋನ್ ಮೂಲಕ ಕಾಳಜಿಯಿಂದ ವಿಚಾರಿಸಿಕೊಳ್ಳುತ್ತಿದ್ದುದು ನನಗೆ ಅಪಾರ ಮಾನಸಿಕ ಬೆಂಬಲ ನೀಡಿದೆ.. ದಿನಾಲೂ ಫೋನ್ ಮಾಡಿ ಮಾತನಾಡಿದ ಸಹೋದರ ಲಕ್ಷ್ಮಣ ಜಡಗನ್ನವರ ಮತ್ತು ಎಲ್ಲ ಶಿಕ್ಷಕ ಮಿತ್ರರಿಗೆ ಆಭಾರಿಯಾಗಿರುವೆ.

ಹೀಗೆ ಹೆದರದೇ, ಧೈರ್ಯದಿಂದ ಕೊರೋನಾಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಕೊರೋನಾದಿಂದ ಗುಣಮುಖರಾಗಬಹುದು..

ಆದ್ದರಿಂದ ಗೆಳೆಯರೆ, ನಿಮಗೆ, ನಿಮ್ಮ ಮನೆಯಲ್ಲಿ, ಸುತ್ತಮುತ್ತ ಲು ಯಾರಿಗಾದರೂ ಜ್ವರ, ನೆಗಡಿ, ಸುಸ್ತು ಕಂಡುಬಂದರೆ ಹೆದರಬೇಡಿ. ಕೂಡಲೇ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿಕೊಳ್ಳಿ. ರಿಪೋರ್ಟ್ ಗಾಗಿ ದಾರಿ ಕಾಯದೇ ಚಿಕಿತ್ಸೆ ಶುರು ಮಾಡಿದರೆ ಏನೂ ಆಗುವುದಿಲ್ಲ. ಆರಾಮಾಗುತ್ತದೆ.

ನನ್ನ ಕಷ್ಟದ ದಿನಗಳಲ್ಲಿ ನನ್ನ ಜೊತೆ ನಿಂತ ಎಲ್ಲರಿಗೂ ವಂದಿಸುತ್ತೇನೆ.. ಸೋಂಕಿತರಾದ ಎಲ್ಲರೂ ಗುಣಮುಖರಾಗಲೆಂದು ಹಾರೈಸುತ್ತೇನೆ.

ಧನ್ಯವಾದಗಳು..🙏🙏

ವಿಠ್ಠಲ ದಳವಾಯಿ
ಶಿಕ್ಷಕರು

LEAVE A REPLY

Please enter your comment!
Please enter your name here